ಶುಕ್ರವಾರ, ನವೆಂಬರ್ 16, 2012

ತಾಳ್ಮೆ

"ಯಾವ ಸಂಧರ್ಭದಲ್ಲಿ, ಯಾವ ವಿಷಯಕ್ಕೆ" ಅನ್ನುವುದರ ಮೇಲೆ ತಾಳ್ಮೆಯ ಬೆಲೆ ಮತ್ತು ಬಲ ನಿಂತಿದೆ.  "ತಾಳಿದವನು ಬಾಳಿಯಾನು" ಅನ್ನೋದನ್ನ ನನ್ನ ಅಪ್ಪನ ಬಾಯಿಯಿಂದ "ಅಯ್ಯೋ ಅಪ್ಪಾಜಿ ಎಷ್ಟ್ ಸಾರೀ ಹೇಳ್ತೀರ್ ರೀ" ಅನ್ನೋ ಮಟ್ಟಕ್ಕೆ ಕೇಳಿದ್ದೇನೆ.
 ನನ್ನ ತಂದೆ ಸ್ವಲ್ಪ ಅತೀ ಅನ್ಸೋ ಮಟ್ಟಕ್ಕೆ ಕೆಲವು ವಿಷಯಗಳಲ್ಲಿ ತಾಳ್ಮೆ ತೋರಿದರು, ಕೆಲವದರಲ್ಲಿ ಕಡಿಮೆ. ಆದರೂ... ಹಿಂದಿರುಗಿ ನೋಡಿದರೆ ಅವರ ತಾಳ್ಮೆಯಿಂದ ನಾನು ಕಲಿತದ್ದು ಅಪಾರ.
ನನ್ನದೇ ಜೀವನದ ಪ್ರತೀ ಹೊಸ ಕಷ್ಟ/ಸುಖ ದ  ಸಂಧರ್ಭಗಳಿಂದಲೂ ತಾಳ್ಮೆಯ ಲಾಭ ಮತ್ತು ನಷ್ಟ [ನಷ್ಟ ಕಡಿಮೆಯೇ ಅಂದ್ರೂ] ಪಡೆಯುತ್ತಿದ್ದೇನೆ.  ನಾನು ಲಾಭ ಮತ್ತು ನಷ್ಟಗಳ ಬಗ್ಗೆ ಕೇವಲ ಹಣದ ವ್ಯವಹಾರಿಕ ದೃಷ್ಟಿಯಿಂದ ಹೇಳುತ್ತಿಲ್ಲ. ತಾಳ್ಮೆಯ ನಿಜವಾದ ಅರ್ಥ ಪಡೆದು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಲೋ ವ್ಯವಧಾನ ಎಷ್ಟು ಮಂದಿಗಿದೆ? ನಾನು ಕಂಡ ಜನರು ಕಡಿಮೆ.
ತಾಳ್ಮೆಯೆಂದರೆ ನಿಧಾನವಾಗಿ ಕೆಲಸ ಮಾಡುವುದು ಎಂದೂ ಬಹಳಷ್ಟು ಜನರ ಆರ್ಥ ಕೋಶದಲ್ಲಿದೆ.

ತಾಳ್ಮೆ ಮಾನಸಿಕ ಸ್ಥಿತಿ: ನಿಧಾನ ಅನ್ನುವುದು ಭೌತಿಕ ಎಂಬ ಅನ್ವಯ ಸಾಮಾನ್ಯ.
 ಹಾಗೆಯೇ ಒಂದು ಕಾರ್ಯದಲ್ಲಿನ ತರ್ಕದ ವೈಫಲ್ಯತೆಯನ್ನು, ತಾಳ್ಮೆಗೆ  ವರ್ಗಾಯಿಸಿ, "ಸುಮ್ನೆ ಕಾಯಬಾರದಿತ್ತು ಕಣ್ರೀ" ಅನ್ನೋವ್ರ ಮಾತೂ ಕೇಳುತ್ತೇವೆ. . ತಾಳ್ಮೆಗೂ ತರ್ಕಕ್ಕೂ ಅರ್ಥ ಬೇರೆ ಇದೆ ... ಯಾವುದೇ ಕೆಲಸದ ಸಫಲತೆಗೆ ಯೋಜನೆ ಬೇಕು, ಸಂಪನ್ಮೂಲ ಬೇಕು. ಎಲ್ಲವೂ ಯೋಜನೆಯಂತೆ ಜರುಗುವ ತರ್ಕ ಸರಿಯಾದ ಮೇಲೆ ತಡೆಯುವವರಾರು? - ಸಮಯ !!.   ಆ ಸರಿಯಾದ ಸಮಯಕ್ಕೆ ತಯಾರಾಗುವ, ತಯಾರಾಗಿ ಕಾಯುವ ಮನಸ್ಥಿತಿಯೇ ತಾಳ್ಮೆ.
ಯಾವುದೇ ವಿಷಯದ ಅನುಭವ / ಅರ್ಥ ನಮಗೆ ತಿಳಿದು ಮತ್ತೊಬ್ಬರಿಗೆ ತಿಳಿ ಹೇಳುವಾಗಲೂ ಅಷ್ಟೇ.. ಸರಿ ಸಮಯಕ್ಕಾಗಿ ಕಾಯಬೇಕಾಗುತ್ತದೆ.

ತನ್ನ ತರ್ಕ, ಯೋಜನೆ ಸರಿಯಾಗಿದೆ ಮತ್ತು ಆಶಿಸಿದ ಫಲ ಸಿಕ್ಕೇ ಸಿಗುತ್ತದೆಂದು ಗೊತ್ತಿದ್ದೂ ಕೇವಲ ಆ ಸರಿಯಾದ ಸಮಯಕ್ಕಾಗಿ ಕಾಯುತ್ತ ಯಾರಿಗೂ ಹೇಳದೆ ತಾಳ್ಮೆಯಿಂದ ಸುಮ್ಮನಿರುವ ವ್ಯಕ್ತಿಯ ಮನಸ್ಥಿತಿ ಅದೆಷ್ಟು ಸಮತೋಲನದಲ್ಲಿರಬೇಕು ?

ತನ್ನ ಗುರಿ ತಲುಪಲು ಎಲ್ಲವೂ ಸಿದ್ಧವಾಗಿ, ಯಶಸ್ಸು ಕಣ್ಣೆದುರು ಕಂಡು ಇನ್ನೇನು ಒಂದು ಹೆಜ್ಜೆಯ ಸಮಯ ಅನ್ನುವಾಗ  ಉಕ್ಕುವ ಸಂತೋಷ, ಗರ್ವ ತಡೆಯಲಾಗದೆ "ಡಂಗೂರಿಸಿ" ಹೇಳಿ ಎಲ್ಲರ ಮೆಚ್ಹುಗೆಯ ಪಾತ್ರರಾಗಿ, ಗಮನ ಸೆಳೆದು ನಂತರ ಆ ಕೊನೆಯ ಹೆಜ್ಜೆಯಲ್ಲಿ  ಎಡವಿದವರ ಉದಾಹರಣೆ ಸಾವಿರ ಇವೆ . "ಎಲ್ಲ ಸರಿ ಇತ್ತು, ಸ್ವಲ್ಪವೇ ಸ್ವಲ್ಪ ಕಾದಿದ್ದರೆ ಆಗಿತ್ತು , ಆತುರ ಪಟ್ಟೆವು" ಅನ್ನೋ ಪಶ್ಚಾತ್ತಾಪದ ಮಾತು ನಾನೇ ಹಲವಾರು ಬಾರಿ ಕೇಳಿದ್ದೇನೆ, ಆಡಿದ್ದೇನೆ.

 ಉಕ್ಕುವ ಸಂತೋಷ, ನಂತರ ದೊರಕುವ ಜನರ ಮನ್ನಣೆ, ಮೆಚ್ಚುಗೆ/ ಕೀರ್ತಿ/ ಸಂಪತ್ತು ಯಾವುದೇ ಇರಲಿ, ಇವೆಲ್ಲವನ್ನೂ ಕೈಯಳತೆಯಲ್ಲೇ ಕಾಣುತ್ತಿದ್ದರೂ ಎಂದಿನಂತೆ ಸಹಜವಾಗಿ ಆ ನನಸಾಗುವ ಕ್ಷಣದವರೆಗೂ ತಾಳ್ಮೆಯಿಂದಿರುವುದು ವ್ಯಕ್ತಿಯ ಪ್ರಬುದ್ಧತೆ ತೋರಿಸುತ್ತದೆ.
ಅದಕ್ಕೂ ಮಿಗಿಲಾಗಿ, ನಿರಂತರ ಸೋಲಿನ ನಂತರವೂ ಮತ್ತೆ ಅಷ್ಟೇ/ಹೆಚ್ಚು ಪ್ರಮಾಣದ ತಯಾರಿ ನಡೆಸಿ ಗೆಲುವಿನ ಫಲಕ್ಕಾಗಿ ಕಾಯುವ ತಾಳ್ಮೆ ಸಾಮಾನ್ಯರನ್ನು ಮಹಾತ್ಮರನ್ನಾಗಿ ಮಾಡುತ್ತದೆ. ಇವನು/ಇವಳು ಅಸಾಮಾನ್ಯರು ಎಂದು ಜನ ಗೌರವಿಸುವಂತೆ ಮಾಡುತ್ತದೆ.

ವಿಪರ್ಯಾಸ ಏನೆಂದರೆ, ಪ್ರತಿದಿನ ನಮ್ಮ ಬದುಕಿನ ಭಾಗವಾದ , ನಮಗಾಗಿ ನಿಜವಾದ ಕಾಳಜಿ ತೋರುವ ನಮ್ಮವರಿಗೇ ನಾವು ತಾಳ್ಮೆ ತೋರುವುದಿಲ್ಲ. ಮುಖ್ಯವಾಗಿ ಪತ್ನಿ/ತಿ, ಮಗ/ಳು , ಅಮ್ಮ/ಪ್ಪ , ಸ್ನೇಹಿತ/ತೆ [ನಮ್ಮ ಬಗ್ಗೆ ನಿಜವಾದ ಕಾಳಜಿ ತೋರುವ ಯಾವುದೇ ವ್ಯಕ್ತಿ ] ಇವರಿಗೇ ತೋರದ ತಾಳ್ಮೆ ಅಕ್ಕ ಪಕ್ಕದವರಿಗೋ, ಹೊರ ಜನರಿಗೋ ತೋರಿದರೆ ಏನು ಬೆಲೆ ಇದೆ .. ?  ಬೇರೆಯವರಿಗೆ ತೋರಿಸಿದ ತಾಳ್ಮೆ ತಪ್ಪಲ್ಲ ಆದರೆ ನಮ್ಮವರಿಗೇ ಇರದ ತಾಳ್ಮೆ ಹೊರಗಿನವರಿಗೆ ತೋರಿದರೆ ಅದು ಕೇವಲ ಬೂಟಾಟಿಕೆ.
ಅಂತರಾತ್ಮದ ಸತ್ವವೇ ಇಲ್ಲದೆ ಕೇವಲ ನಾನೆಷ್ಟು ತಾಳ್ಮೆಯ ವ್ಯಕ್ತಿ ಎಂದು ಹೊರಗೆ ತೋರಿಸುವ ಟೊಳ್ಳು ಜೀವಿ.

(ನಮ್ಮ ನಾಡಿನಲ್ಲಿ ನಮ್ಮವರಿಗಿಂತ ಮುಂಚೆ ಹೊರಗಿನವರಿಗೆ [ಕನ್ನಡೇತರರಿಗೆ] ಅವಶ್ಯಕತೆ ಇಲ್ಲದಿದ್ದರೂ ತಾಳ್ಮೆ ತೋರುವ ಕನ್ನಡಿಗ/ಕನ್ನಡತಿಯೂ ಅಷ್ಟೇ ..... )